ಪರಾಗಸ್ಪರ್ಶಕ್ರಿಯೆ
ಹೂ ಬಿಡುವ ಸಸ್ಯಗಳಲ್ಲಿ ಬೀಜ ರೂಪುಗೊಳ್ಳಬೇಕಾದರೆ ಗಂಡು ಮತ್ತು ಹೆಣ್ಣು ಘಟಕಗಳು ಪರಸ್ಪರ ಕೂಡಬೇಕು. ಈ ಕೂಡುವಿಕೆಯ ಮೊದಲ ಘಟ್ಟ ಗಂಡು ಭಾಗವಾದ ಪರಾಗಕೋಶದಿಂದ ಪರಾಗ ಹೆಣ್ಣು ಭಾಗವಾದ ಅಂಡಾಶಯಕ್ಕೆ ವರ್ಗಾಯಿಸಲ್ಪಡುವುದು ಈ ಕ್ರಿಯೆಗೆ ಪರಾಗಸ್ಪರ್ಶಕ್ರಿಯೆ(ಪಾಲಿನೇಷನ್) ಎಂದು ಹೆಸರು. ಪರಾಗಸ್ಪರ್ಶಕ್ರಿಯೆಯಲ್ಲಿ ಎರಡು ವಿಧ 1 ಸ್ವಪರಾಗಸ್ಪರ್ಶಕ್ರಿಯೆ 2 ಅನ್ಯಪರಾಗಸ್ಪರ್ಶಕ್ರಿಯೆ.

	1 ಸ್ವಪರಾಗಸ್ಪರ್ಶಕ್ರಿಯೆ : ಇದರಲ್ಲಿ ಒಂದು ಹೂವಿನ ಪರಾಗ ಅದೇ ಹೂವಿನ ಅಥವಾ ಅದೇ ತರದ ಬೇರೊಂದು ಹೂವಿನ ಶಲಾಕಾಗ್ರದ ಮೇಲೆ ಬೀಳುತ್ತದೆ. ಹಲವು ಸಸ್ಯಗಳಲ್ಲಿ ಇದನ್ನು ನೋಡಬಹುದು. ಉದಾಹರಣೆಗೆ ಬತ್ತ, ಗೋದಿ, ಆಲೂಗಡ್ಡೆ, ಹೊಗೆಸೊಪ್ಪು, ಸಣಬು, ಸೂರ್ಯಕಾಂತಿ ಇತ್ಯಾದಿ. ಸಾಮಾನ್ಯವಾಗಿ ಪರಾಗಕೋಶ ಮತ್ತು ಶಲಾಕಾಗ್ರ ಒಟ್ಟಿಗೆ ಬಲಿಯುವಂಥ ದ್ವಿಲಿಂಗಿ ಪುಷ್ಪಗಳಲ್ಲಿ ಈ ತೆರನ ಪರಾಗಸ್ಪರ್ಶಕ್ರಿಯೆ ಉಂಟು. ಒಂದೇ ಸಮಯದಲ್ಲಿ ಎರಡೂ ಭಾಗಗಳು ಬಲಿತಾಗ ಪರಾಗ ಶಲಾಕಾಗ್ರದ ಮೇಲೆ ಬಿದ್ದು. ಮೊಳೆತು, ನಿಷೇಚನ ನಡೆಯುತ್ತದೆ. ಇನ್ನು ಕೆಲವು ಬಗೆಯ ಸಸ್ಯಗಳಲ್ಲಿ ಹೂಗಳು ಅರಳುವುದೇ ಇಲ್ಲ. ಇಂಥ ಹೂಗಳಿಗೆ ಸಂವೃತ ಪುಷ್ಪಗಳೆಂದೂ ಈ ಸ್ಥಿತಿಗೆ ಸಂವೃತ ಪುಷ್ಪತ್ವವೆಂದೂ (ಕ್ಲೈಸ್ಟೊಗಮಿ) ಹೆಸರು. ಹೂಗಳು ಅರಳದೇ ಇರುವುದರಿಂದ ಆ ಹೂವಿನಲ್ಲಿ ಉತ್ಪತ್ತಿಯಾಗುವ ಪರಾಗ ಅದೇ ಹೂವಿನ ಶಲಾಕಾಗ್ರದ ಮೇಲೆ ಬಿದ್ದು, ಮೊಳೆತು ನಿಶೇಚನದಲ್ಲಿ ಕೊನೆಗೊಳ್ಳುತ್ತದೆ. ಉದಾಹರಣೆಗೆ ಕನ್ನೆಗಿಡ ಮತ್ತು ಪುಳ್ಳಂಪರ್ಚಿ.

	ಸ್ವಪರಾಗಸ್ಪರ್ಶಕ್ರಿಯೆಯಲ್ಲಿ ಒಂದೇ ಗಿಡ ಭಾಗವಹಿಸುವುದರಿಂದ ಭಿನ್ನತೆಯನ್ನಾಗಲಿ ಉತ್ತಮ ತಳಿಯನ್ನಾಗಲಿ ಪಡೆಯಲಾಗುವುದಿಲ್ಲ. ಆದರೂ ಆರ್ಥಿಕ ಪ್ರಾಮುಖ್ಯವುಳ್ಳ ಬತ್ತ, ಗೋಧಿ, ಹೊಗೆಸೊಪ್ಪು ಇತ್ಯಾದಿ ಸಸ್ಯಗಳಲ್ಲಿ ಈ ಬಗೆಯ ಕ್ರಿಯೆ ಇರುವುದು ಸೋಜಿಗ.

	2 ಅನ್ಯಪರಾಗಸ್ಪರ್ಶಕ್ರಿಯೆ : ನಿಸರ್ಗದಲ್ಲಿ ಹೆಚ್ಚಾಗಿ ಕಾಣಬರುವುದು ಈ ಬಗೆಯ ಕ್ರಿಯೆ. ಪರಾಗಕ್ಕೆ ಚಲನಶಕ್ತಿ ಇಲ್ಲದಿರುವುದರಿಂದ ಈ ಕ್ರಿಯೆಗೆ ಒಂದು ಮಾಧ್ಯಮ ಅವಶ್ಯ. ಮಾಧ್ಯಮಗಳು ಗಾಳಿ, ನೀರು ಅಥವಾ ಪ್ರಾಣಿಗಳಾಗಿರಬಹುದು. ಈ ಮಾಧ್ಯಮಗಳಿಗೆ ಅನುಗುಣವಾಗಿ ಈ ಕ್ರಿಯೆಯನ್ನು ಅನಿಮಾಫೈಲೀ, ಹೈಡ್ರೋಫೈಲೀ ಮತ್ತು ಜೂóಆಫೈಲೀಗಳಾಗಿ ವಿಂಗಡಿಸಬಹುದು. ಆಯಾ ಮಾಧ್ಯಮಗಳಿಗೆ ತಕ್ಕಂತೆ ಆಯಾ ಹೂಗಳು ಮತ್ತು ಗಿಡಗಳು ಹೊಂದಾಣಿಕೆಯನ್ನು ತೋರಿಸುತ್ತವೆ.

	ಗಾಳಿಯಿಂದ ನಡೆಯುವ ಪರಾಗಸ್ಪರ್ಶಕ್ಕೆ (ಅನಿಮಾಫೈಲೀ) ಅನುಗುಣವಾಗಿ ಆ ಬಗೆಯ ಹೂಗಳು ಚಿಕ್ಕದಾಗಿರುತ್ತವೆ. ಅವುಗಳಲ್ಲಿ ಬಣ್ಣವಾಗಲಿ ವಾಸನೆಯಾಗಲಿ, ಮಕರಂದವಾಗಲಿ ಇರುವುದಿಲ್ಲ. ಪರಾಗ ಹಗುರವಾಗಿದ್ದು, ಅದರ ಮೊತ್ತ ಅಗಾಧವಾಗಿರುವುದರಿಂದ ಗಾಳಿಯಲ್ಲಿ ತೇಲಾಡಲು ಅನುಕೂಲವುಂಟು. ಈ ಬಗೆಯ ಹೂವಿನ ಶಲಾಕೆ ಅಥವಾ ಶಲಾಕಾಗ್ರ ಕವಲೊಡೆದಿರುವುರಿಂದ ಗಾಳಿಯಲ್ಲಿ ತೇಲುವ ಪರಾಗವನ್ನು ಹಿಡಿಯಲು ಸುಲಭ. ಕೆಲವು ಜಲಸಸ್ಯಗಳಲ್ಲಿ ನೀರಿನಿಂದ ನಡೆಯುವ ಪರಾಗಸ್ಪರ್ಶಕ್ರಿಯೆಯನ್ನು (ಹೈಡ್ರೋಫೈಲೀ) ಕಾಣಬಹುದು ಉದಾಹರಣೆಗೆ ವ್ಯಾಲಿಸ್‍ನೇರಿಯ, ಹೈಡ್ರಿಲ ಮುಂತಾದವು. ವ್ಯಾಲಿಸ್‍ನೇರಿಯದಲ್ಲಿ ಹೆಣ್ಣು ಮತ್ತು ಗಂಡು ಗಿಡಗಳು ಬೇರೆ ಬೇರೆಯಾಗಿವೆ. ಗಂಡುಹೂವು ಹೂಗೊಂಚಲಿನಿಂದ ಬೇರ್ಪಟ್ಟು ನೀರಿನ ಮೇಲೆ ತೇಲುತ್ತದೆ. ಹೆಣ್ಣು ಹೂವಿಗೆ ಉದ್ದನೆಯ ತೊಟ್ಟಿದೆ. ಅದು ನೀರಿನ ಪಾತಳಿಯ ಮೇಲೆ ಚಾಚಿದ್ದು ಅರಳುತ್ತದೆ. ನೀರಿನಲ್ಲಿ ತೇಲುತ್ತಿರುವ ಗಂಡು ಹೂಗಳು ನೀರಿನ ಅಲೆಗಳ ಮೂಲಕ ಹೆಣ್ಣು ಹೂಗಳಿರುವಲ್ಲಿಗೆ ತೇಲುತ್ತ ಬಂದು ಪರಾಗವನ್ನು ಹೊರಸೂಸುತ್ತವೆ. ಹೀಗೆ ಬಂದ ಪರಾಗ ಹೆಣ್ಣುಹೂವಿನ ಶಲಾಕಾಗ್ರಕ್ಕೆ ಅಂಟಿಕೊಳ್ಳುತ್ತದೆ. ಅನಂತರ ಹೆಣ್ಣು ಹೂವಿನ ತೊಟ್ಟು ಸುರುಳಿ ಸುತ್ತಿಕೊಂಡು ಚಿಕ್ಕದಾಗಿ ಹೂವನ್ನು ನೀರಿನೊಳಕ್ಕೆ ಗಿಡದ ಬುಡಕ್ಕೆ ಎಳೆದುಬಿಡುತ್ತದೆ. ಫಲ ರೂಪುಗೊಂಡು ಬಲಿಯುವುದು ಸಸ್ಯದ ಬುಡದಲ್ಲಿ.

	ಪ್ರಾಣಿಗಳಿಂದ ನಡೆಯುವ ಪರಾಗಸ್ಪರ್ಶಕ್ರಿಯೆ (ಜೂóಆಫೈಲೀ)ಯಲ್ಲಿ ಕೀಟಗಳು, ಹಕ್ಕಿಗಳು, ಅಳಿಲುಗಳು, ಬಾವಲಿಗಳು, ಬಸವನಹುಳು ಮುಂತಾದ ಪ್ರಾಣಿಗಳು ಪಾಲ್ಗೊಳ್ಳಬಹುದು. ಇವುಗಳಲ್ಲಿ ಬಹುಮುಖ್ಯವಾದವು ಕೀಟಗಳು ಇವುಗಳಿಂದ ನಡೆಯುವ ಪರಾಗಸ್ಪರ್ಶಕ್ರಿಯೆಗೆ ಎಂಟಮಾಫೈಲೀ ಎಂದು ಹೆಸರು. ಈ ವಿಧಾನಕ್ಕೆ ಹೊಂದಿಕೊಂಡಂಥ ಗಿಡಗಳು ಹೂಗಳು ಕೀಟಗಳನ್ನು ಆಕರ್ಷಿಸಲು ಅನೇಕ ಸಾಧನಗಳನ್ನು ಪಡೆದಿವೆ. ಇವುಗಳಲ್ಲಿ ಬಣ್ಣ, ಮಕರಂದ ಮತ್ತು ವಾಸನೆ ಮುಖ್ಯವಾದವು.

	ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುವ ಹೂಗಳಲ್ಲಿಯ ಮುಖ್ಯ ಅಂಶ ಬಣ್ಣ ಸಾಮಾನ್ಯವಾಗಿ ದಳಗಳು ವರ್ಣರಂಜಿತವಾಗಿರುತ್ತವೆ. ವಿವಿಧ ರೀತಿಯ ಕೀಟಗಳು ವಿವಿಧ ರೀತಿಯ ಬಣ್ಣಕ್ಕೆ ಮಾರುಹೋಗುತ್ತವೆ. ಉದಾಹರಣೆಗೆ ನಿಶಾಚರಿಗಳಾದ ಪತಂಗಗಳು ಬಿಳಿಬಣ್ಣದಿಂದ ಆಕರ್ಷಿತವಾದರೆ ಹಗಲು ಸಂಚರಿಸುವ ಚಿಟ್ಟೆಗಳು ಕೆಂಪು ಬಣ್ಣದಿಂದ, ಜೇನುಹುಳುಗಳು ನೀಲಿ ಬಣ್ಣದಿಂದ ಸೆಳೆಯಲ್ಪಡುವುವು. ಹಲವು ಬಗೆಯ ಹೂಗಳಲ್ಲಿ ದಳ ಅಷ್ಟು ವರ್ಣರಂಜಿತವಾಗಿಲ್ಲದೇ ಇರಬಹುದು. ಅಂಥ ಹೂಗಳಲ್ಲಿ ಇತರ ಭಾಗಗಳು ವರ್ಣರಂಜಿತವಾಗಿದ್ದು ಕೀಟಗಳನ್ನು ಆಕರ್ಷಿಸಬಹುದು. ಉದಾಹರಣೆಗೆ ಬೋಗನ್‍ವಿಲ್ಯದಲ್ಲಿ ಪುಷ್ಪಪತ್ರಕಗಳು ವರ್ಣರಂಜಿತವಾಗಿದ್ದರೆ. ಬಾಳೆಯಲ್ಲಿ ಹೂಗೊಂಚೆಲಿನ ಹೊದಿಕೆ (ಸ್ಪೇದ್) ವರ್ಣಮಯವಾಗಿದ್ದು ಕೀಟಗಳನ್ನು ಆಕರ್ಷಿಸುತ್ತವೆ.

	ಕೀಟಗಳನ್ನು ಆಕರ್ಷಿಸುವ ಮತ್ತೊಂದು ಸಾಧನವೆಂದರೆ ಮಕರಂದ. ಸಂಯುಕ್ತ ಪುಷ್ಪದಳಗಳಿರುವ ಹೂಗಳಲ್ಲೆಲ್ಲ ಸಾಮಾನ್ಯವಾಗಿ ಮಕರಂದವಿರುತ್ತದೆ. ಮಕರಂದ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಈ ಸಿಹಿಪದಾರ್ಥ ದಳಗಳ ಬುಡದಲ್ಲಿ ಸಂಗ್ರಹ ಗೊಂಡಿರುವುದು. ಕರ್ಣಕುಂಡಲ ಮುಂತಾದವುಗಳಲ್ಲಿ ಮಕರಂದ ಕೊಳವೆಗಳೆಂಬ(ಸ್ಟರ್) ವಿಶೇಷ ಕೊಳವೆಗಳಲ್ಲಿ ಇದು ಸಂಗ್ರಹವಾಗಿರಬಹುದು. ಚಿಟ್ಟೆ, ದುಂಬಿ ಅಥವಾ ಜೇನುಹುಳುಗಳು ಮಕರಂದ ಆಸೆಗೆ ಇದನ್ನು ಕುಡಿಯಲು ಬಂದಾಗ ಪರಾಗಸ್ಪರ್ಶ ಕ್ರಿಯೆಯನ್ನೂ ನಡೆಸುತ್ತವೆ.

	ರಾತ್ರಿ ಅರಳುವ ಹೂಗಳು ವಾಸನೆಯ ಮೂಲಕ ಕೀಟಗಳನ್ನು ಆಕರ್ಷಿಸುತ್ತವೆ. ಉದಾಹರಣೆಗೆ ಪಾರಿಜಾತ, ರಾತ್ರಿರಾಣಿ, ಮಲ್ಲಿಗೆ ಇತ್ಯಾದಿ. ಈ ಪುಷ್ಪಗಳಲ್ಲಿ ದಳಗಳು ಅಷ್ಟು ವರ್ಣರಂಜಿತವಾಗಿರುವುದಿಲ್ಲ. ಸುವರ್ಣಗಡ್ಡೆ ಹೂಗಳಿಗೆ ಒಂದು ರೀತಿಯ ಕೆಟ್ಟವಾಸನೆ ಇರುತ್ತದೆ. ಆದರೂ ಕೆಲವು ಜಾತಿಯ ನೊಣಗಳು ಈ ವಾಸನೆಯಿಂದ ಆಕರ್ಷಿತವಾಗುವುವು.

	ಕೀಟಗಳ ಸಹಾಯದಿಂದ ಪರಾಗಸ್ಪರ್ಶಕ್ರಿಯೆ ನಡೆಯುವ ಹೂಗಳ ಪರಾಗ ಅಂಟು ಅಂಟಾಗಿರುತ್ತದೆ ಹಾಗೂ ಪರಾಗರೇಣುವಿನ ಹೊರಭಾಗದಲ್ಲಿ ಮುಳ್ಳಿನಂಥ ರಚನೆಗಳೂ ಇರುತ್ತವೆ. ಶಲಾಕಾಗ್ರ ಕೂಡ ಅಂಟು ದ್ರವದಿಂದ ಆವೃತವಾಗಿರುವುದು. ಈ ಕ್ರಿಯೆಯ ಅನುಕೂಲಕ್ಕಾಗಿ ಹೂಗಳಲ್ಲಿ ಅನೇಕ ರಚನಾಕೌಶಲಗಳನ್ನು ಕಾಣಬಹುದು. ಇವುಗಳಲ್ಲಿ ಮುಖ್ಯವಾದುವು : (i) ಏಕಲಿಂಗಿತ್ವ : ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಗಿಡಗಳಲ್ಲಿ ಹುಟ್ಟುವುದರಿಂದ ಇಲ್ಲಿ ಅನ್ಯಪರಾಗಸ್ಪರ್ಶ ಕ್ರಿಯೆಯೇ ನಡೆಯಬೇಕು.

	(ii) ಸ್ವವಂಧ್ಯಾತ್ವ : ಈ ವಿಧದ ಗಿಡಗಳು ದ್ವಿಲಿಂಗ ಪುಷ್ಪಗಳನ್ನು ಹೊಂದಿದ್ದರೂ ಒಂದು ಹೂವಿನ ಪರಾಗ ಅದೇ ಹೂವಿನ ಶಲಾಕಾಗ್ರದ ಮೇಲೆ ಬಿದ್ದರೂ ಮೊಳೆಯಲಾರದು. ಇಂಥ ಹೂಗಳಿಗೆ ಅನ್ಯಪರಾಗದಿಂದ ಮಾತ್ರ ನಿಷೇಚನ ಸಾಧ್ಯ. ಉದಾಹರಣೆಗೆ ಶ್ರೀ ಮುದ್ರೆ ಗಿಡ, ಪ್ಯಾಸಿಫ್ಲೋರ

	(iii) ಡೈಕೋಗೆಮಿ : ಇಲ್ಲಿ ಪುಷ್ಪಗಳು  ದ್ವಿಲಿಂಗಿಗಳಾದರೂ ಕೇಸರ ಮತ್ತು ಅಂಡಾಶಯಗಳು ಬೇರೆ ಬೇರೆ ಸಮಯಗಳಲ್ಲಿ ಬಲಿಯುವುದರಿಂದ, ಪರಾಗ ಅದೇ ಹೂವಿನ ಶಲಾಕಾಗ್ರದ ಮೇಲೆ ಬಿದ್ದರೂ ಮೊಳೆಯುವುದಿಲ್ಲ. ಕಾರಣ ಶಲಾಕಾಗ್ರ ಇನ್ನೂ ತೆರೆದೇ ಇರುವುದಿಲ್ಲ. ಇಂಥ ಹೂಗಳಿಗೆ ಅನ್ಯ ಪರಾಗವೇ ಗತಿ. ಉದಾಹರಣೆಗೆ ಆಲ, ಕಂಬದ ಮರ, ಸಂಪಿಗೆ ಇತ್ಯಾದಿ.

	ಅನ್ಯಪರಾಗಸ್ಪರ್ಶಕ್ರಿಯೆಯಿಂದ ಬಹಳಷ್ಟು ಅನುಕೂಲತೆಗಳಿವೆ. ಈ ಪ್ರಕ್ರಿಯೆಯಲ್ಲಿ ಎರಡು ಭಿನ್ನ ಗಿಡಗಳು ಪಾಲ್ಗೊಳ್ಳುತ್ತವೆ. ಇದರಲ್ಲಿ ಭಿನ್ನಗಿಡಗಳ ಪ್ರತ್ಯೇಕ ಗುಣಗಳು ಮಿಳಿತವಾಗುವುದರಿಂದ ಇವೆರಡಕ್ಕಿಂತ ಭಿನ್ನವಾದ ಮತ್ತು ಉತ್ತಮವಾದ ತಳಿ ಉತ್ಪತ್ತಿಯಾಗುವ ಸಂಭವವುಂಟು. ಇದರಿಂದ ಹೊಸಬಗೆಯ ಗಿಡಗಳು ಅಥವಾ ಪ್ರಕಾರಗಳು ರೂಪುಗೊಳ್ಳುವ ಸಾಧ್ಯತೆ ಇದೆ ಇದರ ಫಲವಾಗಿ ಉತ್ಪತ್ತಿಯಾಗುವ ಬೀಜಗಳು ಸಾಮಾನ್ಯವಾಗಿ ಉತ್ತಮ ಬಗೆಯವಾಗಿರುವುವು. ಇಂಥ ಬೀಜಗಳಿಂದ ಹುಟ್ಟುವ ಗಿಡಗಳು ಹೆಚ್ಚು ಆರೋಗ್ಯವಂತ ಹಾಗೂ ಪರಿಸರಕ್ಕೆ ಹೊಂದಿಕೊಳ್ಳುವಂಥ ಗಿಡಗಳಾಗಿವೆ. ಆದ್ದರಿಂದ ಪ್ರಕೃತಿಯಲ್ಲಿ ಹೆಚ್ಚಾಗಿ ಕಾಣುವುದು ಅನ್ಯ ಪರಾಗಸ್ಪರ್ಶಕ್ರಿಯೆ.
(ಕೆ.ಎನ್.ಜಿ.)
(ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ